ನರಸಾರ್ಯ
ಸು. 1600. ಪದ್ಯಗಣಸಹಸ್ರನಾಮ ಎಂಬ ಕೃತಿಯ ಕರ್ತೃ. ಪಾಲ್ಕುರಿಕೆ ಸೋಮನಾಥ ಕವಿ ರಚಿಸಿದ ಸಹಸ್ರಗಣನಾಮ ಎಂಬ ಕೃತಿಯನ್ನೇ ಉತ್ತೊಳಲು ಎಂಬ ಊರಿಗೆ ಒಡೆಯನಾದ ಅಮೃತನೃಪನ ಆಜ್ಞೆಗನುಸಾರವಾಗಿ ಈತ ಕಂದವೃತ್ತ ರೂಪಗಳಲ್ಲಿ ರಚಿಸಿದ್ದಾನೆ. ಮಲ್ಲಿಕಾರ್ಜುನ ಪಂಡಿತಾರಾಧ್ಯ, ಪಾಲ್ಕುರಿಕೆ ಸೋಮನಾಥ ಹಾಗೂ ನರಸಾರ್ಯ ಈ ಮೂವರ ಕೃತಿಗಳು ಒಂದೇ ವಿಷಯವನ್ನು ಕುರಿತವು. ನರಸಾರ್ಯನ ಕೃತಿಯಲ್ಲಿ ಎಂಟು ಪ್ರಕರಣಗಳಲ್ಲಿ ಪ್ರಮಥಗಣ ರುದ್ರಗಣ ವೃಷಭಗಣ ತ್ರಿಷಷ್ಟಿಗಣ ಷೋಡಶಗಣ ತೆರಸಗಣ ದಶಗಣ ಅಸಂಖ್ಯಾತಗಣ- ಹೀಗೆ ಎಂಟು ಗಣಗಳನ್ನು ವಿವರಿಸಿದೆ. ಪ್ರತಿ ಪ್ರಕರಣದಲ್ಲೂ ಶಿವಪಾರ್ವತಿಯರ ಸಂವಾದರೂಪದ ಕೆಲ ಚಮತ್ಕಾರಿಕ ಮಾತುಗಳ ಅನಂತರ ಗಣಸ್ತುತಿಯನ್ನು ಬರೆದಿರುವುದು ಇಲ್ಲಿಯ ವೈಶಿಷ್ಟ್ಯ. ಪದ್ಯಬಂಧ ಸುಶ್ರಾವ್ಯವಾಗಿದೆ.
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ